ದೇಶಿಯ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಭಾರತವು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ- ಡಾ| ರೋಹಿಣಾಕ್ಷ ಶಿರ್ಲಾಲು

ಭಾರತ ದೇಶದ ಆರ್ಥಿಕ ಮತ್ತು ಭೌಗೋಳಿಕ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಚೀನಾ ವಸ್ತುಗಳನ್ನು ನಿಷೇಧಿಸಲು ನಾವು ಮುಂದಾಗಬೇಕು. ದೇಶಿಯ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ಭಾರತವು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ| ರೋಹಿಣಾಕ್ಷ ಶಿರ್ಲಾಲು ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಚೀನಾ ವಸ್ತುಗಳ ಬಹಿಷ್ಕಾರ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Dr.-Rohinaksha-Speaking

ಕಮ್ಯೂನಿಸ್ಟ್ ಪ್ರೇರಿತವಾದ ಸರ್ವಾಧಿಕಾರ ವ್ಯವಸ್ಥೆಯನ್ನು ಹೊಂದಿರುವ ಚೀನಾ ದೇಶವು ಭಾರತವನ್ನು ಬಗ್ಗುಬಡಿಯುವಂತಹ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಕೊಲ್ಲುವ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸ್ಥಾನವನ್ನು ನೀಡುವ ವಿಚಾರದಲ್ಲಿ ಚೀನಾ ವಿರೋಧಿಸುತ್ತಲೇ ಬಂದಿದೆ. ಭಾರತವನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸೈನಿಕ ಶಕ್ತಿಯಿಂದ ಮಣಿಸಬೇಕೆಂಬ ತಂತ್ರವನ್ನು ಮಾಡಿಕೊಂಡು ಬಂದಿದೆ.ಗಡಿಭಾಗದ ಒಳಗೆ ಬಂದು ಭಾರತದ ಸಾರ್ವಭೌಮತೆಯನ್ನು ಕೆದಕುವ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ನೆರೆರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನಾ ಶತ್ರುದೇಶಗಳಂತೆ ವರ್ತಿಸುತ್ತಿವೆ. ಕಾಶ್ಮೀರದಲ್ಲಿ ಕಿರುಕುಳ, ಗಡಿಯಲ್ಲಿ ಉಪಟಳ, ಭಯೋತ್ಪಾದಕತೆಗೆ ಕುಮ್ಮಕ್ಕು ನೀಡಿ ಪರೋಕ್ಷ ಯುದ್ಧದಲ್ಲಿ ಪಾಕಿಸ್ಥಾನ ತೊಡಗಿಸಿಕೊಂಡಿದೆ. ನಮ್ಮ ಸಾಂಸ್ಕೃತಿಕ ರಾಷ್ಟ್ರದ ಭಾಗವಾಗಿದ್ದ ಟಿಬೆಟ್ ದೇಶವನ್ನು ಚೀನಾ ಕಬಳಿಸಿದೆ. 1962 ರಲ್ಲಿ ಆಕ್ರಮಣ ಮಾಡಿ ನೇಘಾ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ನಮ್ಮ ದೇಶದ ರಾಜ್ಯವಾದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಉಲ್ಲೇಖಿಸಿ ತನಗೆ ಸೇರಿದ್ದು ಎಂದು ಹೇಳುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ವಿಷಯದಲ್ಲಿ ಅಡ್ಡಗಾಲು ಹಾಕುತ್ತಿದೆ. ಭಾರತದ ಮೇಲೆ ನಿರಂತರ ಆಕ್ರಮಣ ನಡೆಸುತ್ತಿರುವ ಪಾಕಿಸ್ಥಾನಕ್ಕೆ ಪರೋಕ್ಷ ಸಹಾಯದ ಹಸ್ತವನ್ನು ನೀಡುತ್ತಿದೆ.

ವಿದೇಶಿ ವಿನಿಮಯದ ರೂಪದಲ್ಲಿ ಭಾರತವು 20% ವ್ಯಾಪಾರವನ್ನು ಚೀನಾದೊಂದಿಗೆ ಹೊಂದಿದೆ. ಆದರೆ 70% ವ್ಯಾಪಾರವನ್ನು ಚೀನಾ ದೇಶವು ಭಾರತದೊಂದಿಗೆ ಹೊಂದಿದ ಪರಿಣಾಮವಾಗಿ ಭಾರತ ದೇಶದ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಕುಸಿಯುತ್ತಿದೆ. ಚೀನಾದ ಸರಕುಗಳು ನಮ್ಮ ದೇಶದ ಮಾರುಕಟ್ಟೆಯನ್ನು ಆವರಿಸಿ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವಸ್ತುಗಳಿಗೆ ಬೇಡಿಕೆ ಕುಸಿದು ಸಣ್ಣ ಉದ್ದಿಮೆಗಳು, ಗುಡಿಕೈಗಾರಿಕೆಗಳು ಮುಚ್ಚಬೇಕಾದ ಅಪಾಯದ ಪರಿಸ್ಥಿತಿ ಎದುರಾಗುತ್ತಿದೆ. ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ಸಾಮಾಗ್ರಿಗಳು ಮುಂತಾದ ಚೀನಾದ ವಸ್ತುಗಳನ್ನು ಖರೀದಿಸುವುದರಿಂದ ನಮ್ಮ ಶತ್ರುದೇಶವಾದ ಚೀನಾಕ್ಕೆ ಪ್ರೋತ್ಸಾಹಿಸಿದಂತೆ ಆಗುತ್ತದೆ. ಅನಧಿಕೃತವಾಗಿ ಚೀನಾ ನಿರ್ಮಿತ ವಸ್ತುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಹಿತದ ಬಗ್ಗೆ ಚಿಂತಿಸಬೇಕು. ಅದಕ್ಕಾಗಿ ಕ್ರಿಯಾಶೀಲನಾಗಬೇಕು. ಭಾರತ ದೇಶದ ಆರ್ಥಿಕ ಮತ್ತು ಭೌಗೋಳಿಕ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಚೀನಾ ವಸ್ತುಗಳನ್ನು ನಿಷೇಧಿಸಲು ನಾವು ಮುಂದಾಗಬೇಕು. ದೇಶಿಯ ಉತ್ಪನ್ನಗಳನ್ನು ಉಪಯೋಗಿಸುವುದರಿಂದ ದೇಶವು ಸ್ವಾವಲಂಬಿ, ಸುವ್ಯವಸ್ಥಿತ, ವೈಭವಶಾಲಿ, ಶಕ್ತಿ ಸಂಪನ್ನವಾಗುತ್ತದೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಚೀನಾಕ್ಕೆ ತಕ್ಕ ಉತ್ತರ ನೀಡಬೇಕು ಎಂದರು.

ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ.ಪಿ, ಸಂಚಾಲಕ ಸಂತೋಷ್ ಬಿ, ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಸಾದ್ ಶ್ಯಾನಭಾಗ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಕುಮಾರಿ ಅಕ್ಷತಾ ನಿರೂಪಿಸಿ, ಶ್ರೀಮತಿ ಶಶಿಕಲಾ ವಂದಿಸಿದರು.

Highslide for Wordpress Plugin