ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಹೆತ್ತವರು ಹಿರಿಯರಿಗೆ ಗೌರವ ಕೊಟ್ಟಾಗ ಮಗು ಕೂಡ ಇತರರಿಗೆ ಗೌರವ ಕೊಡುವುದನ್ನು ಕಲಿಯುತ್ತದೆ. ಈ ಕಾರಣದಿಂದ ನಮ್ಮ ನಡವಳಿಕೆ ಶುದ್ಧವಾಗಿರಬೇಕು. ಜೀವನದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಸಂಸ್ಕಾರ ಭಾರತಿ ದ.ಕ.ಜಿಲ್ಲೆ ಇದರ ಜಿಲ್ಲಾ ಸಂಚಾಲಕರಾದ ಶ್ರೀ ಸೂರ್ಯನಾರಾಯಣ ಭಟ್ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ’ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಮಕ್ಕಳು ಇಚ್ಛಾಶಕ್ತಿ, ಬದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ಮಗುವಿನಲ್ಲಿ ಹುದುಗಿರುವ ಪ್ರತಿಭಾ ಸಾಮರ್ಥ್ಯವನ್ನು ಬೆಳೆಸುವಂತಾಗಬೇಕೇ ವಿನಾ ಹೆತ್ತವರು ತಮ್ಮ ಸ್ವಾರ್ಥಕ್ಕೆ ಅಂಟಿಕೊಂಡು ಮಕ್ಕಳ ಮೇಲೆ ಒತ್ತಡ ಹೇರಬಾರದು. ನಕರಾತ್ಮಕ ಮಾತುಗಳನ್ನಾಡದೆ ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರನ್ನಾಗಿ ಮಾಡಿಸುವುದು ಹೆತ್ತವರ ಕರ್ತವ್ಯ ಎಂದರು.

Shri-Surya-Narayana-Bhat-speaking

Shri-Balakrishna-Bhat-speaking

ಮುಖ್ಯ ಅತಿಥಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಾಲಕೃಷ್ಣ ಭಟ್ ಮಾತನಾಡಿ ನಕರಾತ್ಮಕ ಮಾತುಗಳನ್ನಾಡದೆ ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರನ್ನಾಗಿ ಮಾಡಿಸುವುದು ಹೆತ್ತವರ ಕರ್ತವ್ಯ. ಪ್ರತಿ ಮಗುವೂ ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಆದ್ದರಿಂದ ಪೋಷಕರು ಮಕ್ಕಳೊಡನೆ ಕಾಲ ಕಳೆಯಲು ಸಮಯವನ್ನು ಮೀಸಲಿಟ್ಟರೆ ಅವರ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಮಕ್ಕಳ ಭಾವಲೋಕ, ಕಲ್ಪನಾಲೋಕಕ್ಕೆ ನೀರೆರೆದು ಬೆಳೆಸುವ ಕೆಲಸ ಪೋಷಕರದ್ದಾಗಬೇಕು. ಸತ್ಯದ ಸಾಕ್ಷಾತ್ಕಾರದ ಕಡೆಗೆ ಮಗುವು ಮುಖ ಮಾಡುವಂತಾಗಬೇಕು. ಮಗುವಿನ ಮನೋದೈಹಿಕ ಬದಲಾವಣೆಯನ್ನು ಪೋಷಕರು ಸದಾ ಗಮನ ಹರಿಸುವಂತಾಗಬೇಕು ಎಂದರು.

Shri-Harish--Acharya-Speaking

ಮುಖ್ಯ ಅಭ್ಯಾಗತರಾದ ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀ ಹರೀಶ್ ಆಚಾರ್ಯ ಮಾತನಾಡಿ ಶಿಕ್ಷಣವು ವ್ಯಕ್ತಿಯೊಳಗಿನ ಪರಿಪೂರ್ಣತೆಯನ್ನು ಅನಾವರಣಗೊಳಿಸುತ್ತದೆ. ಎಲ್ಲೋ ಬಿದ್ದ ಶಿಲೆಯನ್ನು ಕಡೆದು ದೇಗುಲದೊಳಗಿಟ್ಟ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲಬೇಕು ಹಣತೆ ಉರಿದು ಬೆಳಕು ನೀಡುವಂತೆ ವಿದ್ಯಾರ್ಥಿಗಳನ್ನು ಕಾಲಕಾಲಕ್ಕೆ ಪೋಷಿಸಿ ಸರಿಯಾದ ಮಾರ್ಗದರ್ಶನದೊಂದಿಗೆ ಅವರನ್ನು ಪ್ರಜ್ವಲಿಸುವಂತೆ ಮಾಡಬೇಕಾದುದು ಪ್ರತಿಯೊಬ್ಬ ಹೆತ್ತವರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಮ್ ಕೃಷ್ಣ ಭಟ್ ಮಾತನಾಡಿ ಭಗೀರಥ ಪ್ರಯತ್ನದಿಂದ ನಾವು ಏನನ್ನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಶಿಸ್ತು, ಛಲ ಮತ್ತು ಸ್ಪಷ್ಟ ಗುರಿ ಇದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ. ಹೆತ್ತವರು ಮಕ್ಕಳ ಆಸಕ್ತಿ ಅರಿತು ಸಹಕರಿಸಿದಾಗ ಸರ್ವಾಂಗೀಣ ಪ್ರಗತಿ ಸಾಧ್ಯ. ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳಲ್ಲಿ ಸಂಪರ್ಕವನ್ನಿಟ್ಟುಕೊಂಡು ಅವರ ನೋವು ನಲಿವುಗಳಲ್ಲಿ ಭಾಗಿಯಾಗಿ ಭವ್ಯ ಭವಿಷ್ಯವನ್ನು ರೂಪಿಸಬೇಕು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ. ಸುಧಾ ಎಸ್. ರಾವ್ ಮಾತನಾಡಿ ಗುರುಹಿರಿಯರಿಗೆ ಗೌರವ ಕೊಡುವುದರೊಂದಿಗೆ ಸಚ್ಚಾರಿತ್ರ್ಯವಂತರಾಗಿ ಉತ್ತಮ ನಡೆ ನುಡಿಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ಸ್ಪಂದಿಸಲು ಶಿಕ್ಷಕ- ರಕ್ಷಕ ಸಂಘವು ಮಾಧ್ಯಮವಾಗಬೇಕು ಎಂದರು.

ಕಾಲೇಜು ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ವತ್ಸಲ ರಾಜ್ಙಿ ಮಾತನಾಡುತ್ತಾ ಮಕ್ಕಳು ಮಾಡುವ ತಪ್ಪನ್ನು ತಿಳಿ ಹೇಳಿ ತಿದ್ದುವ ಮಕ್ಕಳ ಉತ್ತಮ ಕಾರ್ಯಗಳಿಗೆ ಪೋತ್ಸಾಹಿಸುವ ಕೆಲಸವನ್ನು ಹಿರಿಯರು ಮಾಡಬೇಕು. ಹೆತ್ತವರ ಮತ್ತು ಅಧ್ಯಾಪಕರ ಒಗ್ಗೂಡುವಿಕೆಯ ಪ್ರಯತ್ನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳು ನಮ್ಮ ಮಾತುಗಳಿಗಿಂತ ನಮ್ಮ ನಡತೆಗಳನ್ನು ಅನುಸರಿಸುತ್ತಾರೆ. ಮಕ್ಕಳು ಮಂದೆ ಬರಬೇಕೆಂದು ಬಯಸುವ ನಾವು ಎಂದೂ ಅವರಿಗೆ ಮಾದರಿಯಾಗಿರುವುದಿಲ್ಲ. ಹಿರಿಯರು ಅವರಿಗೆ ಮಾದರಿಯಾಗಿ ಬದುಕಿದರೆ ಮಾತ್ರ ಅವರ ಶ್ರೇಯಸ್ಸನ್ನು ನಿರೀಕ್ಷಿಸಲು ಸಾಧ್ಯ ಎಂದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ವಿದ್ಯಾರ್ಥಿನಿ ಹರಿತಾ ಎಂ.ಬಿ. ಇವರಿಗೆ ಲ್ಯಾಪ್‌ಟಾಪ್‌ನ್ನು ನೀಡಿ ಗೌರವಿಸಲಾಯಿತು. ವಾಣಿಜ್ಯವಿಭಾಗದಲ್ಲಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದ ಕೃಪಾ ರೈ ಹಾಗೂ ಕಲಾ ವಿಭಾಗದಲ್ಲಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದ ಅಶ್ವತ್ ಶೆಟ್ಟಿ ಮತ್ತು ಸುಮ್ಯ ಇವರಿಗೆ ಟ್ಯಾಬ್­ನ್ನು ನೀಡಿ ಗೌರವಿಸಲಾಯಿತು.

ಸಿ.ಇ.ಟಿ, ಜೆ.ಇ.ಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಶ್ರಾವ್ಯ ಕೆ. ಎನ್, ಅಜಯಕೃಷ್ಣ. ಯು ಅನೀಶ್ ಜಿ., ಸ್ವಾತಿ ಕೆ., ಸ್ವರೂಪ್, ಅನುಷ ಕೆ. ಇವರಿಗೆ ಬ್ಯಾಗ್ ಮತ್ತು ಪುಸ್ತಕ ನೀಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಶ್ರೀ ಜೀವನ್‌ದಾಸ್ ಇವರು 2017-18 ರ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ವರದಿ ವಾಚನವನ್ನು ಮಾಡಿದರು.

ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ.ಪಿ, ಖಜಾಂಚಿ ಕೊಟ್ಯಪ್ಪ ಪೂಜಾರಿ, ಸಂಚಾಲಕರಾದ ಸಂತೋಷ್, ಸದಸ್ಯರಾದ ರವಿ ಮುಂಗ್ಲಿಮನೆ,ಶಿಕ್ಷಕ-ರಕ್ಷಕ ಸಂಘದ ಗೌರವಾಧ್ಯಕ್ಷರಾದ ಶ್ರೀ ವಸಂತ ಭಟ್ ,ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶ್ಯಾಮಲ, ಉಪಾಧ್ಯಕ್ಷೆ ಶ್ರೀಮತಿ ಮಂಗಳ ಗೌರಮ್ಮ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಪುಷ್ಪಲತಾ ನಿರೂಪಿಸಿ ಕು.ಹರ್ಷಿತ ವಂದಿಸಿದರು.

Highslide for Wordpress Plugin