ವಿವೇಕಾನಂದರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಕೆ ಅತ್ಯಗತ್ಯ – ಪೂಜ್ಯ ಜಿತಕಾಮಾನಂದಜಿ

ಮಾನವೀಯ ಮೌಲ್ಯಗಳ ಜೊತೆಜೊತೆಗೆ ಸವಲತ್ತುಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳ ಪ್ರಯತ್ನ ನಿರಂತರವಾಗಿರಬೇಕು. ವ್ಯಕ್ತಿ ದೇಶಕ್ಕೆ ಕೊಡುಗೆ ನೀಡಬೇಕಾದರೆ ವಿಜ್ಞಾನಿಯೇ ಆಗಬೇಕೆಂದಿಲ್ಲ. ಯಾವುದೇ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದರೂ ತನ್ನ ಕನಸನ್ನು ನನಸಾಗಿಸಬಹುದು ಎಂದು ಮೈಸೂರು ಶ್ರೀ ರಾಮ ಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಆತ್ಮಜ್ಞಾನಾಂದಜಿ ಹೇಳಿದರು.

swamiji-talk

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ಮನುಷ್ಯನ ಒಳಗಡೆ ಇರುವ ರಾಕ್ಷಸ ಗುಣವನ್ನು ಸಾಯಿಸಿ ಅವನಲ್ಲಿರುವ ದೇವರ ಗುಣವನ್ನು ಹೊರಗೆ ತೆಗೆಯಬೇಕು. ಇದು ಶಿಕ್ಷಣದ ಮೂಲ ಉದ್ದೇಶವಾಗಬೇಕು. ಉತ್ತಮ ಶಿಕ್ಷಣದ ಮೂಲಕ ವ್ಯಕ್ತಿಯು ಸಮಾಜಕ್ಕೆ ಉಪಯೋಗವಾಗುವಂತಹ ಬದುಕನ್ನು ರೂಪಿಸಬೇಕು. ಪ್ರತಿಯೊಂದು ವಿದ್ಯಾಸಂಸ್ಥೆಯಿಂದ ಹೊರಗೆ ಕಲಿತು ಹೋಗುವ ವಿದ್ಯಾರ್ಥಿಯು ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ರೂಪಿಸಿಕೊಳ್ಳುವ ರೀತಿಯಲ್ಲಿ ತನ್ನ ಜೀವನವನ್ನು ನಡೆಸಬೇಕು. ವಿದ್ಯಾರ್ಥಿಯು ತನ್ನ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಣಯ ಸಮಾಜಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಋಣಾತ್ಮಕ ಅಂಶಗಳನ್ನು ಬಿಟ್ಟು ಧನಾತ್ಮಕ ಅಂಶಗಳೆಡೆಗೆ ವಿದ್ಯಾರ್ಥಿಗಳು ಗಮನ ಕೊಡಬೇಕು. ಈ ಮೂಲಕ ನಮ್ಮ ಕನಸುಗಳನ್ನು ಯಶಸ್ವಿಗೊಳಿಸಿ ಮುಂದಿನ ಒಳ್ಳೆಯ ಪ್ರಜೆಗಳಾಗಿ ಬಾಳಬೇಕು ಎಂದು ಶುಭ ಹಾರೈಸಿದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಂಗಳೂರಿನ ಶ್ರೀ ರಾಮ ಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮಲು ಸಾಧ್ಯ. ಸ್ವಾಮಿ ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ನಡತೆ, ವ್ಯಕ್ತಿತ್ವ ರೂಪುಗೊಳ್ಳುವ ಮೂಲಕ ಭಾರತವು ಜಗದ್ಗುರು ಆಗಬೇಕೆಂದುಕೊಂಡ ಸುಂದರ ಕನಸು ಈಡೇರಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹರೀಶ ಶಾಸ್ತ್ರಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಉಪನ್ಯಾಸಕಿ ಕುಮಾರಿ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Highslide for Wordpress Plugin