ಶಿಕ್ಷಕ-ರಕ್ಷಕ ಸಂಘದ ಸಭೆ

ಹೆತ್ತವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕು : ಶ್ರೀಮತಿ ವತ್ಸಲ ರಾಜ್ಞಿ

ಬದುಕಿನ ತತ್ವ, ನಿಷ್ಠೆಗಳನ್ನು ಮೈಗೂಡಿಸಿಕೊಂಡು ಗೆಲುವಿನ ಹಾದಿಯಲ್ಲಿ ಸಾಗುವ ಛಲ ವಿದ್ಯಾರ್ಥಿಗಳಿಗಿದ್ದರೆ ಯಶಸ್ಸನ್ನು ಸಾಧಿಸಬಹುದು. ಅಜ್ಞಾನ, ಅಶ್ರದ್ಧೆ, ನಿರಾಸಕ್ತಿಗಳನ್ನು ಕಳಚಿ ಜಡತೆ, ಆಲಸ್ಯಗಳ ಬಂಧನಗಳನ್ನು ಕಿತ್ತೊಗೆದರೆ ಅವರು ಸಾಧನೆಯ ಶಿಖರವನ್ನೇರಬಲ್ಲರು. ಆದ್ದರಿಂದ ಹೆತ್ತವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿ ಅವರನ್ನು ಯೋಗ್ಯ ವ್ಯಕ್ತಿಗಳನ್ನಾಗಿಸಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ವತ್ಸಲ ರಾಜ್ಞಿ ಹೇಳಿದರು.

DSC_0031

ವಿವೇಕಾನಂದ ಪದವಿಪೂರ್ವ ಕಾಲೇಜಿನ 2017-18 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಂತಿಮ ವಾರ್ಷಿಕ ಸಭೆಯಲ್ಲಿ ’ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಮಕ್ಕಳು ಇಚ್ಛಾಶಕ್ತಿ, ಬದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ಹೆತ್ತವರು ಮಗುವಿನಲ್ಲಿ ಹುದುಗಿರುವ ಪ್ರತಿಭೆ, ಸಾಮರ್ಥ್ಯಗಳನ್ನು ಬೆಳೆಸಬೇಕೇ ಹೊರತು ಅವರ ಮೇಲೆ ಒತ್ತಡ ಹೇರಬಾರದು. ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರನ್ನಾಗಿಸಬೇಕು ಎಂದರು.

Shri-Shivaram-Bhat-speaking

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿಕ್ಷಕ-ರಕ್ಷಕ ಸಂಘದ ಸದಸ್ಯ ಶಿವರಾಮ ಭಟ್ ಮಾತನಾಡಿ ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಗುರಿ. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮೂಡಿಸುವ ಮೂಲಕ ಅವರನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ಯುವ ಜವಾಬ್ದಾರಿ ಹೆತ್ತವರಿಗಿದೆ. ಪ್ರತಿ ಮಗುವೂ ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಆದ್ದರಿಂದ ಪೋಷಕರು ಮಕ್ಕಳೊಡನೆ ಕಾಲ ಕಳೆಯಲು ಸಮಯವನ್ನು ಮೀಸಲಿಟ್ಟರೆ ಅವರ ವಿಕಾಸಕ್ಕೆ ಸಹಾಯವಾಗುತ್ತದೆ. ಮಕ್ಕಳ ಭಾವಲೋಕಕ್ಕೆ ನೀರೆರೆದು ಬೆಳೆಸುವ ಕೆಲಸ ಪೋಷಕರದ್ದಾಗಬೇಕು. ಅವರು ಸತ್ಯದ ಕಡೆಗೆ ಮುಖ ಮಾಡುವಂತಾಗಬೇಕು ಎಂದರು.

ಉಪನ್ಯಾಸಕರುಗಳಾದ ಮುರಳಿ ಪಿ.ಜಿ ಮತ್ತು ಚೈತ್ರಾ. ಎಂ ದ್ವಿತೀಯ ಪಿಯುಸಿ ಪರೀಕ್ಷೆಯ ತಯಾರಿ ಮತ್ತು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಪರೀಕ್ಷೆಯ ನೀತಿ ನಿಯಮಾವಳಿಗಳ ಸ್ಥೂಲ ಪರಿಚಯವನ್ನು ನೀಡಿದರು.

ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಪ್ರೊ. ವಿವೇಕ್ ರಂಜನ್ ಭಂಡಾರಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ವಂದನಾ ಶಂಕರ್ ದ್ವಿತೀಯ ಪಿಯುಸಿ ನಂತರದ ವ್ಯಾಸಂಗಗಳ ಆಯ್ಕೆ, ಕಾಲೇಜಿನಲ್ಲಿ ದೊರಕುವ ವಿವಿಧ ಸವಲತ್ತುಗಳು ಮತ್ತು ಸಂಸ್ಥೆಯ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಜೀವನ್ ದಾಸ್ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿಮನೆ, ಉಪಪ್ರಾಂಶುಪಾಲರಾದ ಪರಮೇಶ್ವರ ಶರ್ಮ ಉಪಸ್ಥಿತರಿದ್ದರು. ಉಪನ್ಯಾಸಕಿ ದಯಾಮಣಿ ಕಾರ್ಯಕ್ರಮವನ್ನು ನಿರೂಪಿಸಿ ಹರ್ಷಿತ ವಂದಿಸಿದರು.

Highslide for Wordpress Plugin