ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಎದುರಾಗುವ ತಲ್ಲಣ, ಮಾನಸಿಕ ಗೊಂದಲಗಳನ್ನು ಎದುರಿಸಿ ಏಕಾಗ್ರತೆ, ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ವತ್ಸಲಾ ರಾಜ್ಞಿ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2017 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸರಳ ಬದುಕಿನ ಕ್ರಿಯಾಧರ್ಮದ ಮುನ್ನೋಟ, ಮಾನವೀಯ ಮಿಡಿತ, ಗುರುಭಕ್ತಿ, ಪರಂಪರೆಯ ಮೇಲಿನ ಗೌರವಗಳನ್ನು ನಿಜಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಸೃಜನಶೀಲತೆ, ಛಲ ಮತ್ತು ಆತ್ಮವಿಶ್ವಾಸ ಇದ್ದಾಗ ಮಾತ್ರ ಕನಸನ್ನು ನನಸಾಗಿಸಲು ಸಾಧ್ಯ. ಕನಸು ಇದ್ದರೆ ಮಾತ್ರ ಜೀವನ ಪರಿಪೂರ್ಣವಾಗಿರುತ್ತದೆ. ಕ್ಷಮತೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ಯಾವ ಕನಸು ನಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದು ನಿಜವಾದ ಕನಸು ಎಂದರು.
ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಬೆಳ್ಳಾರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿ ಕನಸಿನ ಸಾಕಾರಕ್ಕೆ ಸಾಥ್ ನೀಡುವ ಕಾರ್ಯವನ್ನು ಕಾಲೇಜು ಮಾಡುತ್ತಿದೆ. ಹೊಸತನ್ನು ಕಂಡುಹಿಡಿಯುವ ಅವಕಾಶವನ್ನು ನೀಡಿ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ ಅವರ ಅಸ್ತಿತ್ವವನ್ನು ಭದ್ರಪಡಿಸಲು ಸಹಾಯ ಮಾಡುತ್ತಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಇತರ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಾಗ ತಮ್ಮ ಕನಸನ್ನು ನನಸಾಗಿಸಲು ಸಾಧ್ಯ. ಇದಕ್ಕೆ ಯಾವುದೇ ಕಷ್ಟಗಳು ಬಂದರೂ ನಿರಂತರ ಪ್ರಯತ್ನ ಮತ್ತು ಹುರುಪಿನಿಂದ ಯಶಸ್ಸು ಗಳಿಸಬಹುದು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಶ್ರೀ ಗಣೇಶ ಎಚ್ ಮಾತನಾಡಿ ಭವಿಷ್ಯದ ಬಗ್ಗೆ ಗುರಿ ಸ್ಪಷ್ಟವಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಕಠಿಣ ಪರಿಶ್ರಮ, ತ್ಯಾಗದ ಮೂಲಕ ಸಮಾಜಕ್ಕೆ ದಾರಿದೀಪವಾಗಬೇಕು ಆಧುನಿಕ ತಂತ್ರಜ್ಞಾನವನ್ನು ಹದವರಿತು ಬಳಸುತ್ತಾ ಜಾಗತಿಕ ವಿಚಾರಗಳೆಡೆಗೆ ಸಕ್ರಿಯ ಸ್ಪಂದನವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲರಾದ ಶ್ರೀ ಜೀವನ್ದಾಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ, ಇಸ್ರೋದ ನಿವೃತ್ತ ವಿಜ್ಞಾನಿ ಶ್ರೀ ಶಂಕರ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕಿ ವಿನೋದಾ ಸರಸ್ವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಪ್ರಾಂಶುಪಾಲರಾದ ಶ್ರೀ ಪರಮೇಶ್ವರ ಶರ್ಮ ಅತಿಥಿಗಳನ್ನು ಸ್ವಾಗತಿಸಿ ಉಪನ್ಯಾಸಕಿ ದಯಾಮಣಿ ವಂದಿಸಿದರು.
ಬಳಿಕ ಇಸ್ರೋದ ನಿವೃತ್ತ ವಿಜ್ಞಾನಿ ಶ್ರೀ ಶಂಕರ ಭಟ್ ಪ್ರೌಢಶಾಲಾ ಶಿಕ್ಷಕರಿಗೆ ಅಂತರಿಕ್ಷದಲ್ಲಿ ಭಾರತ-ಅವಶ್ಯಕತೆಗಳು ಮತ್ತು ಸಾಧನೆಗಳು ಮತ್ತು ವಿದ್ಯಾರ್ಥಿಗಳಿಗೆ ಮಂಗಳಯಾನ ಮತ್ತು ಮುಂದೆ ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೋಸ್ಕರ ವಿವಿಧ ಸ್ಪರ್ಧೆಗಳು ನಡೆದವು.