ಗ್ರಾಮ ವಿಕಾಸ ಸಮಾವೇಶದ ಸಮಾಲೋಚನಾ ಕಾರ್ಯಕ್ರಮ

ವಿವೇಕಾನಂದ ವಿದ್ಯಾಸಂಸ್ಥೆಯು ಸುಮಾರು ಮೂವತ್ತ ನಾಲ್ಕು ಗ್ರಾಮದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಗ್ರಾಮದ ಆರೋಗ್ಯ, ಶಿಕ್ಷಣ, ಸಂಸ್ಕಾರ, ಸ್ವಾವಲಂಬನೆ, ಸಾಮಾಜಿಕ ಸುರಕ್ಷೆ ಹೀಗೆ ಹಲವಾರು ಕವಲುಗಳ ಮೂಲಕ ಚಟುವಟಿಕೆಗಳು ಸಾಗುತ್ತಿವೆ. ದೂರದೃಷ್ಟಿ ಮತ್ತು ಸದಭಿರುಚಿಯ ಚಿಂತನೆಗಳನ್ನು ನಡೆಸುತ್ತಾ ಇತರ ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಮುಖ್ ಗುರುರಾಜ ಹೇಳಿದರು.

ವಿವೇಕಾನಂದ ಕಾಲೇಜಿನಲ್ಲಿ ನಡೆದ ಗ್ರಾಮ ವಿಕಾಸ ಸಮಾವೇಶದ ಸಮಾಲೋಚನಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

Gururaj-speaking

ಯುವಶಕ್ತಿಗಳನ್ನು ಒಗ್ಗೂಡಿಸಿಕೊಂಡು ಗ್ರಾಮವಿಕಾಸ ಚಟುವಟಿಕೆಗಳು ನಡೆಯುವಂತಾಗಬೇಕು. ವಿದ್ಯಾರ್ಥಿಗಳು ಈ ಕುರಿತು ಅಧ್ಯಯನ ಪ್ರವಾಸವನ್ನು ಕೈಗೊಳ್ಳಬೇಕು. ಗ್ರಾಮಸ್ಥರನ್ನೆಲ್ಲ ಸೇರಿಸಿಕೊಂಡು ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

Narayana-Shenoy-speaking

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಡಾ. ನಾರಾಯಣ ಶೆಣೈ ಅವರು ’ಜಲ ಮತ್ತು ಪರಿಸರ ಸಂರಕ್ಷಣೆ’ ಎಂಬ ವಿಷಯದ ಕುರಿತು ಮಾತನಾಡಿ ನಿಸರ್ಗವು ನಮಗೆ ತಾಯಿ ಇದ್ದಂತೆ. ಪ್ರಕೃತಿಯ ಮೇಲೆ ಅಧಿಕಾರವನ್ನು ಸ್ಥಾಪಿಸುವ ಹವಣಿಕೆಯಲ್ಲಿ ಮಾನವನು ಅದನ್ನು ಹಾಳುಗೆಡಹುತ್ತಿದ್ದಾನೆ. ಕೈಗಾರಿಕೆ, ತಾಂತ್ರಿಕ ಬದಲಾವಣೆ, ಸಾರಿಗೆ, ಸಮೂಹ ಮಾಧ್ಯಮ, ಜನಸಂಖ್ಯಾ ಹೆಚ್ಚಳಗಳಿಂದಾಗಿ ಪರಿಸರದ ಆರೋಗ್ಯ ಹದಗೆಟ್ಟಿದೆ. ವಾಯು ವಿಷಮಯವಾಗಿ ಕುಡಿಯುವ ನೀರು ಮಲಿನಗೊಂಡು ವಾತಾವರಣ ಕಲುಷಿತಗೊಂಡಿದೆ. ಪ್ರತಿಯೊಬ್ಬ ಮಾನವನೂ ಪರಿಸರದ ಪ್ರಾಮುಖ್ಯತೆಯನ್ನು ಮನಗಂಡು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

Subraya-Nandodi-speaking

ಕರ್ನಾಟಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಮುಖ್ ಸುಬ್ರಾಯ ನಂದೋಡಿ ಅವರು ’ಗ್ರಾಮಗಳಲ್ಲಿ ಆರೋಗ್ಯ’ ಎಂಬ ವಿಷಯದ ಕುರಿತು ಮಾತನಾಡಿ ಮನಸ್ಸಿನ ಆರೋಗ್ಯ ಚೆನ್ನಾಗಿದ್ದರೆ ಮನುಷ್ಯರು ಮಾಡುವ ಎಲ್ಲಾ ಕೆಲಸಗಳು ಚೆನ್ನಾಗಿರುತ್ತವೆ. ಅರೋಗ್ಯಪೂರ್ಣ ಜೀವನ ನಡೆಸದೆ ಶರೀರ ಹಾಗೂ ಮನಸ್ಸಿನ ಅರೋಗ್ಯ ಹಾಳು ಮಾಡಿಕೊಂಡು ಚಿಂತಿತರಾಗಿ ಅರೋಗ್ಯ ಸುಧಾರಣೆ ಮಾಡಿಕೊಳ್ಳುವವರೇ ಹೆಚ್ಚು. ದೇಹವನ್ನು ದೇವಾಲಯದಂತೆ ಪ್ರೀತಿಸಿ ಆತ್ಮನನ್ನು ಪರಮಾತ್ಮನೆಂದು ಆರಾಧಿಸಿದಾಗ ಮನುಷ್ಯನ ಜೀವನ ಶೈಲಿಯು ಸಮಾಜದ ಆರೋಗ್ಯವನ್ನು ವರ್ಧಿಸುವಂತೆ ಮಾಡುತ್ತದೆ. ಧನಾತ್ಮಕ ಚಿಂತನೆ, ಸತ್ಸಂಗ, ಭಜನೆ, ದೇವರ ಆರಾಧನೆ ಮುಂತಾದ ಉತ್ತಮ ಚಟುವಟಿಕೆಗಳಿಂದ ಮನಸ್ಸು ಶ್ರೇಷ್ಠ ಚಿಂತನೆಗಳನ್ನು ಹೊಂದಿ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ಷಿಣ ಮಧ್ಯ ಕ್ಷೇತ್ರೀಯದ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯರಾದ ರತ್ನಾವತಿ ಮತ್ತು ಯಶವಂತಿ ನಿರೂಪಿಸಿದರು. ಪ್ರಾಂಶುಪಾಲ ಜೀವನದಾಸ್ ವಂದಿಸಿದರು.

Highslide for Wordpress Plugin