ಹಾವು-ನಾವು ಕಾರ್ಯಕ್ರಮ

ನಾಗರಿಕತೆಯ ವಿವಿಧ ಮಜಲುಗಳಲ್ಲಿ ಹಾವಿನಂಥ ಜೀವಿಯು ಜನಾಂಗದ ಪ್ರತೀಕವಾಗಿ, ದೇವರ ರೂಪದಲ್ಲಿ ಪೂಜೆಗೆ ಅರ್ಹವಾಗಿರುವುದು ಮನುಷ್ಯನ ಇತಿಹಾಸದಲ್ಲಿಯೇ ವಿಸ್ಮಯಕರ ಘಟನೆಯಾಗಿದೆ. ಹಾವಿನ ಬಗ್ಗೆ ರೋಚಕ ಕತೆಗಳು, ಪುರಾಣಗಳು, ಕಲ್ಪನೆಗಳು, ಮೂಢನಂಬಿಕೆಗಳು ಪ್ರಪಂಚದೆಲ್ಲೆಡೆ ಕಾಣಸಿಗುತ್ತವೆ. ಅವುಗಳನ್ನು ನಾವು ವಿಜ್ಞಾನ ಮತ್ತು ವೈಚಾರಿಕತೆಯ ಹಾದಿಯಲ್ಲಿ ಗ್ರಹಿಸಬೇಕು ಎಂದು ಶೇಷವನ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ| ರವೀಂದ್ರನಾಥ ಐತಾಳ ಹೇಳಿದರು.

ಕನಸುಗಳು 2018 ಕಾರ್ಯಕ್ರಮದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಹಾವು-ನಾವು ಉಪನ್ಯಾಸ ಮತ್ತು ಪ್ರಶ್ನೋತ್ತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

Ravindranath-Ithal-speaking

Ravindranath-Ithal-showing-snakes

ಆಧುನಿಕ ಯುಗದಲ್ಲಿ ಹಾವುಗಳು ನಾಶವಾಗುತ್ತಿರುವುದಕ್ಕೆ ಮನುಷ್ಯನ ಕೈವಾಡವೇ ಕಾರಣ. ಕಾಡುಪೊದೆಗಳ ನಾಶ, ಹೊಲಗದ್ದೆಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸುತ್ತಿರುವುದರಿಂದ ಅವುಗಳು ಪ್ರಾಣ ಕಳೆದುಕೊಳ್ಳುತ್ತವೆ. ನಿಜವಾಗಿಯೂ ನಿರುಪದ್ರವಿಗಳಾದ ಉರಗಗಳು ಮನುಷ್ಯನ ತಂಟೆಗೆ ತಾವಾಗಿ ಎಂದಿಗೂ ಹೋದದ್ದಿಲ್ಲ. ಜೀವ ಜಗತ್ತಿನ ಆಹಾರ ಶೃಂಖಲೆ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಲು ಹಾವುಗಳನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮದಾಗಬೇಕಿದೆ ಎಂದು ಅವರು ನುಡಿದರು. ಆ ಬಳಿಕ ಅವರು ಹಾವಿನ ಹಲವು ಪ್ರಬೇಧಗಳು, ಅಂಗಾಂಗಗಳು, ಅವುಗಳ ಆಹಾರಕ್ರಮ, ಬದುಕಿನ ರೀತಿನೀತಿಗಳು ಮತ್ತು ಹಾವು ಕಚ್ಚಿದರೆ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಕುರಿತು ವಿವರಿಸಿದರು. ಕಟ್ಟಿನ ಹಾವು, ಹೆಬ್ಬಾವು, ನಾಗರಹಾವು, ಕಾಳಿಂಗ ಸರ್ಪ, ಹವಳದ ಹಾವು, ಕನ್ನಡಿ ಹಾವು, ಮಂಡಲಹಾವು, ಸಮುದ್ರ ಹಾವು ಇತ್ಯಾದಿ ಉರಗಗಳ ಕುರಿತು ಮಾಹಿತಿಗಳನ್ನು ಒದಗಿಸಿದರು. ಜೀವಂತ ಹಾವುಗಳನ್ನು ಪ್ರದರ್ಶಿಸಿ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಪ್ರಾಂಶುಪಾಲ ಜೀವನ್ ದಾಸ್ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin