ಕನಸುಗಳು -2018 ಕಾರ್ಯಕ್ರಮದ ಸಮಾರೋಪ ಸಮಾರಂಭ

ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಶೀಲ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮುತ್ತವೆ. ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ, ವ್ಯಕ್ತಿತ್ವ ರೂಪುಗೊಂಡರೆ ಭಾರತ ಶೀಘ್ರದಲ್ಲೇ ಜಗದ್ಗುರು ಎನಿಸಿಕೊಳ್ಳುತ್ತದೆ ಎಂದು ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆಯ ಸಂಚಾಲಕ ಯು. ಜಿ. ರಾಧ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2018  ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

U.G.-Radha-Speaking

Nagaraja-Padakannaya-speaking

ಸಮಾಜದಲ್ಲಿ ಪೂರಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಬೆಳೆಯಬೇಕು.ಯಶಸ್ಸಿನಲ್ಲಿ ಬೀಗದೆ ತಲೆಬಾಗುತ್ತಾ ಜೀವನ ನಿರ್ವಹಿಸಿದರೆ ವ್ಯಕ್ತಿತ್ವ ಸರಳವಾಗುತ್ತದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಮತ್ತು ಸಜ್ಜನಿಕೆಯ ವಾರಸುದಾರರಾಗಬೇಕು. ಸೋಲಿನಿಂದ ಕಂಗೆಡದೆ ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಸಾಗಬೇಕು. ವ್ಯಕ್ತಿಯು ತನ್ನ ದೇಶಕ್ಕೆ ಕೊಡುಗೆ ನೀಡಬೇಕಿದ್ದರೆ ಆತ ಉನ್ನತ ಮಟ್ಟದವನಾಗಬೇಕೆಂದಿಲ್ಲ. ಸಾಮಾನ್ಯ ಮನುಷ್ಯನಾಗಿದ್ದುಕೊಂಡು ಯಾವುದೇ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದರೂ ಕನಸನ್ನು ನನಸಾಗಿಸಬಹುದು ಎಂದರು.

ಮುಖ್ಯ ಅತಿಥಿ ಬಂಟ್ವಾಳದ ಹೂ ಹಾಕುವ ಕಲ್ಲು ಇಲ್ಲಿಯ ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ನಾಗರಾಜ ಪದಕಣ್ಣಾಯ ಮಾತಾನಾಡಿ ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಮಾತ್ರ ಬಂಗಾರದಂತೆ ಬೆಳಗಲು ಸಾಧ್ಯ. ಜೀವನ ಮೌಲ್ಯಗಳಿಗೆಲ್ಲ ನೀತಿಯೇ ಮೂಲ. ನಡೆನುಡಿ, ಆಚಾರ ವಿಚಾರಗಳಲ್ಲಿ ಮೌಲ್ಯಗಳನ್ನು ಮೇಳೈಸಿಕೊಂಡಾಗ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ. ಸ್ಪೂರ್ತಿಯಿಂದ ಜೀವನ ಸಾಗಿಸಿದರೆ ಬದುಕು ಯಶಸ್ಸಿನ ಉತ್ತುಂಗಕ್ಕೆ ಏರಲು ಸಾಧ್ಯ. ಸತ್ಯಧರ್ಮ, ನೈಜನೀತಿ, ಜೀವನನಿಷ್ಠೆ, ಪ್ರಾಮಾಣಿಕತೆಯನ್ನು ಅನುಸರಿಸುತ್ತಾ ಸಾಮಾಜಿಕ ಕಳಕಳಿ, ನೀತಿಬೋಧೆಯ ಸತ್ವವನ್ನು ಅರಿತುಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಧ್ಯೇಯ ಆದರ್ಶಗಳ ಪ್ರಭಾವದಲ್ಲಿ ಮುಂದುವರಿಯುವ ಈ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು ಅವರಲ್ಲಿ ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸುವ ಗುರಿಯನ್ನು ಹೊಂದಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ಪ್ರಾಂಶುಪಾಲ ಜೀವನ್‌ದಾಸ್, ಬಾಲನಟರಾದ ರಂಜನ್(ಪ್ರವೀಣ),ಸಂಪತ್ (ಮಮ್ಮುಟ್ಟಿ),ಸಪ್ತಪಾವೂರ್ (ಪಲ್ಲವಿ), ಅತಿಶ್(ಅರುಣ) ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಪ್ರಸಾದ್ ಶ್ಯಾನುಭಾಗ್ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಕ ಶ್ರೀಧರ್ ಶೆಟ್ಟಿಗಾರ್ ವಂದಿಸಿದರು.

ಸಮಾರೋಪ ಸಮಾರಂಭದ ಮುನ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರದ ಬಾಲನಟರಾದ ರಂಜನ್ (ಪ್ರವೀಣ), ಸಂಪತ್ (ಮಮ್ಮುಟ್ಟಿ), ಸಪ್ತಪಾವೂರ್ (ಪಲ್ಲವಿ), ಅತಿಶ್ (ಅರುಣ) ಇವರ ಜೊತೆ ಹರಟೆ ಮತ್ತು ಮಾತುಕತೆ ನಡೆಯಿತು.

Highslide for Wordpress Plugin