ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಬಂಧನಕ್ಕೆ ಹೊರತಾದ ಶೈಕ್ಷಣಿಕ ವಾತಾವರಣ ಮನೆಯಲ್ಲಿ ಇರಬೇಕು-ಬಿ.ವಿ. ಸೂರ್ಯನಾರಾಯಣ

ನೆಹರೂನಗರ: ಮಕ್ಕಳನ್ನು ಸಾಧನೆಯ ಹಾದಿಯಲ್ಲಿ ನಡೆಯುವಂತೆ ಹೆತ್ತವರು ಪ್ರೇರೇಪಿಸಬೇಕು. ಬಂಧನಕ್ಕೆ ಹೊರತಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕು. ಧನಾತ್ಮಕ ಯೋಚನೆ ಮತ್ತು ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ ಒಲಿಯುತ್ತವೆ. ಮಕ್ಕಳ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಬದುಕಿನೆಡೆಗೆ ಒಲಿಸಲು ಯತ್ನಿಸಬೇಕು. ಜೀವನದ ಮೌಲ್ಯಗಳನ್ನು ತಿಳಿಸಿಕೊಡುವುದರೊಂದಿಗೆ ಸಮಯಪ್ರಜ್ಞೆ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದು ಸವಣೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹೆತ್ತವರ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

B.V-Suryanarayana-Speaking

Dr.-Muralikrishna-Speaking

Sangeeta-Program-by-Jagadeesh-Acharya

ಮಕ್ಕಳು ಇಚ್ಛಾಶಕ್ತಿ, ಬದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರೊಂದಿಗೆ ಪೋಷಕು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರ ವಿನಿಮಯ ಮಾಡಬೇಕು. ಅವರ ಮಾನಸಿಕ ಬೆಳವಣಿಗೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರೆ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ವ್ಯಕ್ತಿತ್ವ ವಿಕಸನವು ಮನೆಯ ಪರಿಸರದಿಂದ ಆಗುವ ಕಾರಣ ಮಕ್ಕಳೊಂದಿಗೆ ಹೆತ್ತವರು ಹೆಚ್ಚು ಕಾಲವನ್ನು ಕಳೆಯಬೇಕು. ಸಕರಾತ್ಮಕ ಮಾತುಗಳನ್ನು ಆಡುವಂತೆ ಜಾಗೃತಿಯನ್ನು ಉಂಟು ಮಾಡಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರನ್ನಾಗಿ ಮಾಡಿಸುವುದು ಹೆತ್ತವರ ಕರ್ತವ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಡಾ| ಮುರಳಿಕೃಷ್ಣ ಮಾತನಾಡಿ ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರನ್ನಾಗಿ ಮಾಡಿಸುವುದು ಹೆತ್ತವರ ಕರ್ತವ್ಯ. ಪ್ರತಿ ಮಗುವೂ ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು. ಅವರ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಬೇಕು. ಅವರ ಭಾವಲೋಕಕ್ಕೆ ನೀರೆರೆದು ಪೋಷಿಸಬೇಕು. ಮಗು ಸತ್ಯದ ಕಡೆಗೆ ಮುಖ ಮಾಡುವಂತಾಗಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ.ಪಿ, ಮಾತನಾಡಿ ಮಕ್ಕಳು ಮಾಡುವ ತಪ್ಪನ್ನು ತಿದ್ದುವ, ಉತ್ತಮ ಕಾರ್ಯಗಳನ್ನು ಪೋತ್ಸಾಹಿಸುವ ಕೆಲಸವನ್ನು ಹಿರಿಯರು ಮಾಡಬೇಕು. ಹೆತ್ತವರ ಮತ್ತು ಅಧ್ಯಾಪಕರ ಒಗ್ಗೂಡುವಿಕೆಯ ಪ್ರಯತ್ನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳು ನಮ್ಮ ಮಾತುಗಳಿಗಿಂತ ನಮ್ಮ ನಡತೆಯನ್ನು ಅನುಸರಿಸುತ್ತಾರೆ. ಹಿರಿಯರು ಮಕ್ಕಳಿಗೆ ಮಾದರಿಯಾದರೆ ಮಾತ್ರ ಅವರ ಶ್ರೇಯಸ್ಸನ್ನು ನಿರೀಕ್ಷಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿಮನೆ, ಶ್ರೀನಿವಾಸ ಭಟ್, ವತ್ಸಲ ರಾಜ್ಙಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಸಾದ್ ಶ್ಯಾನುಭಾಗ್ ಪರೀಕ್ಷೆಯ ವಿಧಿ ವಿಧಾನಗಳ ಕುರಿತು ಮಾಹಿತಿಗಳನ್ನು ನೀಡಿದರು. ಪ್ರಾಂಶುಪಾಲ ಜೀವನದಾಸ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿಯರಾದ ವಿನೋದ ಸರಸ್ವತಿ ಮತ್ತು ಅಕ್ಷತಾ ನಿರೂಪಿಸಿ ಉಪ ಪ್ರಾಂಶುಪಾಲ ಪರಮೇಶ್ವರ ಶರ್ಮ ವಂದಿಸಿದರು.

ಸಂಗೀತ ಗಾನ ಸಂಭ್ರಮ : ಸಮಾರಂಭದ ಬಳಿಕ ಅರ್ಯಭಟ ಪ್ರಶಸ್ತಿ ವಿಜೇತ ಪುತ್ತೂರು ಜಗದೀಶ ಆಚಾರ್ಯ ಕಲಾಸಿಂಧು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.

Highslide for Wordpress Plugin