ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಬೀಳ್ಗೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ರವಿ ಮಂಗ್ಲಿಮನೆ ಮಾತನಾಡಿ ತಂದೆ, ತಾಯಿ ಹಾಗೂ ವಿದ್ಯೆಯನ್ನು ಧಾರೆಯೆರೆದ ಗುರುಗಳ ಆಶೀರ್ವಾದವಿದ್ದರೆ ಜಗತ್ತನ್ನೇ ಗೆಲ್ಲಬಹುದು ಮತ್ತು ಯಶಸ್ಸನ್ನು ಕಾಣಬಹುದು. ಶ್ರದ್ಧೆಯಿಂದ ಕಲಿತು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ಮಾತನಾಡಿ ಅಂತರಂಗ ಶುದ್ಧವಾಗಿದ್ದರೆ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಬಂಧುಪ್ರೇಮ, ದೇಶಪ್ರೇಮದಂಥ ಉತ್ತಮ ಉದಾತ್ತ ಆಲೋಚನೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ. ದೇಹ ಮನಸ್ಸುಗಳ ನಡುವಿನ ಕೊಂಡಿ ಕಳಚಿಕೊಳ್ಳದಂತಿರಬೇಕು. ಚಿಂತೆಯಿಲ್ಲದ ಅತಿ ಶ್ರೇಷ್ಠ ಮನಸ್ಥಿತಿಯನ್ನು ಸಾಧಿಸಬೇಕು. ನಮ್ಮ ಚಲನೆ ಸದಾ ಮೇಲ್ಮುಖವಾಗಿದ್ದು ಯಶಸ್ಸು ನಮ್ಮನ್ನು ಹಿಂಬಾಲಿಸುವಂತಿರಬೇಕು. ಗುರಿತಲುಪಲು ಪರಿಶ್ರಮ ಅಗತ್ಯ. ಏಕಾಗ್ರತೆಯೊಂದಿಗೆ ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳು ಕಾರಣರಾಗಬೇಕು ಎಂದು ಹೇಳಿದರು.
ಉಪನ್ಯಾಸಕರ ಪರವಾಗಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ಶಾಸ್ತ್ರೀ ಮಾತನಾಡಿ ಬಣ್ಣದ ಮಾತುಗಳನ್ನಾಡದೆ ಹಿರಿಯರು ತೋರಿಸಿದ ದಾರಿಯಲ್ಲಿ ನಡೆಯಬೇಕಾದುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಸಕರಾತ್ಮಕ ವಿಚಾರಗಳನ್ನು ಅಳವಡಿಸಿಕೊಳ್ಳುವಂತ ಜಾಗೃತಿ ಮೂಡಬೇಕು. ಉತ್ತಮ ಸಂಸ್ಕೃತಿ – ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಬದುಕುವ ಕಲೆಯನ್ನು ರೂಪಿಸಿಕೊಳ್ಳಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಬೆಳೆಸಿಕೊಂಡಾಗ ನಾವು ಹೃದಯವಂತರಾಗಬಹುದು. ಪ್ರತಿಯೊಂದು ಸ್ಫರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳು ತೋರಿಸಬೇಕು ಎಂದು ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಸಸ್ತಿಕ್ ಪದ್ಮ, ದರ್ಶನ್, ಚೈತ್ರಾ, ಪ್ರಜ್ವಲ್ ಎಂ. ಆರ್, ಜನಾರ್ಧನ್, ಯಕ್ಷಿತಾ ಎಂ, ಆಶ್ವಿಜಾ , ನಿಶ್ಮಿತಾ ಶೆಟ್ಟಿ, ಸಂಜನ್ ಕಾಲೇಜಿನಲ್ಲಿ ಆದ ಸವಿ ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಮುಂದೆ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತರಾಗಲಿರುವ ಜೀವನ್‌ದಾಸ್ ಮತ್ತು ಆಂಗ್ಲ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಇವರನ್ನು ವಿದ್ಯಾರ್ಥಿಗಳ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ಉಪನ್ಯಾಸಕಿ ಶ್ರೀಮತಿ ಜಯಶ್ರೀ ಮಾತನಾಡಿ ಧನಾತ್ಮಕ ಯೋಚನೆ ಮತ್ತು ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ ಒಲಿಯುತ್ತವೆ. ಬದುಕಿನಲ್ಲಿ ಆಶಾಭಾವನೆ ಇರಬೇಕು. ಜೀವನದ ಮೌಲ್ಯಗಳನ್ನು ರೂಪಿಸುತ್ತ ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಉಪನ್ಯಾಸಕಿ ದಯಾಮಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಪ್ರಸಾದ ಶ್ಯಾನುಭಾಗ್ ಸ್ವಾಗತಿಸಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಹರ್ಷ ವಂದಿಸಿದರು.