ದೈನಂದಿನ ಚಟುವಟಿಕೆಗಳು ವಿದ್ಯಾರ್ಥಿಗಳ ಪಾಠಪ್ರವಚನಗಳಲ್ಲಿ ಉದಾಹರಣೆಯಾಗಿ ಬಳಕೆಯಾಗಬೇಕು – ಪ್ರೊ ಪಿ. ರಾಧಕೃಷ್ಣ ಕಾರಂತ್
ಶಿಕ್ಷಣವೆಂದರೆ ಬರೇ ಮಾಹಿತಿಯನ್ನು ಪೇರಿಸುವ ಕ್ರಿಯೆಯಲ್ಲ. ವಿದ್ಯಾರ್ಥಿಗಳಲ್ಲಿ ಈಗಾಗಲೇ ಇರುವಂಥ ಸತ್ವವನ್ನು ಅರಳಿಸುವ ಪ್ರಕ್ರಿಯೆ. ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ, ಅವನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರದ್ದು. ಆದ್ದರಿಂದ ಅವರ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದರೊಂದಿಗೆ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು. ಈ ಮೂಲಕ ಆತ್ಮವಿಶ್ವಾಸದ ಭಾವನೆಗೆ ದಾರಿ ಮಾಡಿಕೊಡಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಪಿ. ರಾಧಕೃಷ್ಣ ಕಾರಂತ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಉದ್ಯೋಗದ ಹೆಸರಿನ ಹಿಂದೆ ಉತ್ಕೃಷ್ಟ ಎಂಬ ಪದವನ್ನು ಸೇರಿಸಿಕೊಳ್ಳಬೇಕಾದರೆ ನಿರಂತರ ಶ್ರಮ ಅತ್ಯಗತ್ಯ. ಅನೇಕ ವರ್ಷಗಳ ಪರಿಶ್ರಮದ ಮೂಲಕ ಶ್ರೇಷ್ಠ ಎನಿಸಿಕೊಳ್ಳಬಹುದು. ಆದರೆ ಆ ಶ್ರೇಷ್ಠತೆಯ ಹಾದಿಯಲ್ಲಿ ಮನ್ನಡೆಯಲು ಆ ಬಗೆಗೆ ನಮ್ಮನ್ನು ನಾವು ಜಾಗೃತಾವಸ್ಥೆಯಲ್ಲಿಟ್ಟುಕೊಳ್ಳಲು ತರಬೇತಿ ಕಾರ್ಯಾಗಾರಗಳು ಸಹಾಯ ಮಾಡುತ್ತವೆ. ಬೋಧಿಸಿದ ವಿಚಾರಗಳು ವಿದ್ಯಾರ್ಥಿಗಳ ದೈನಂದಿನ ಬದುಕಿನಲ್ಲಿ ಉಪಯೋಗವಾಗುವಂತಾಗಬೇಕು. ಈ ಮೂಲಕ ಶಿಕ್ಷಣವು ಬದುಕಿನ ಮೂಲಭೂತ ಪ್ರಶ್ನೆಗಳ ಅನ್ವೇಷಣೆಯ ತಾಣವಾಗಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣವಾದುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅಧ್ಯಾಪಕರು ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ತಯಾರುಗೊಳಿಸಬೇಕು. ವಿದ್ಯಾರ್ಥಿಗಳು ಬದುಕಿನಲ್ಲಿ ಸೋತಾಗ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ತುಂಬಬೇಕು. ಅಲ್ಲದೆ ದೈನಂದಿನ ಚಟುವಟಿಕೆಗಳು ಪಾಠಪ್ರವಚನಗಳಲ್ಲಿ ಉದಾಹರಣೆಯಾಗಿ ಬಳಕೆಯಾದರೆ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವು ಸುಲಭವೆನಿಸುವುದು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಪ್ರಸಕ್ತ ಸನ್ನಿವೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಪಯುಕ್ತತೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪ.ಪೂ.ಕಾಲೇಜು, ತೆಂಕಿಲದ ನರೇಂದ್ರ ಪ.ಪೂ.ಕಾಲೇಜು ಮತ್ತು ಕಲ್ಲಡ್ಕದ ಶ್ರೀರಾಮ ಪ.ಪೂ.ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಜೀವನದಾಸ್ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ ಶಾಸ್ತ್ರೀ ನಿರ್ವಹಿಸಿದರು. ಉಪನ್ಯಾಸಕಿ ಮಾಧವಿ ಪಟೇಲ್ ಸ್ವಾಗತಿಸಿ ಅದಿತಿ ವಂದಿಸಿದರು.