ಸಂಚಾರಿ ಡಿಜಿಟಲ್ ತಾರಾಲಯ

ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನ ಮತ್ತು ವೈಜ್ಞಾನಿಕ ವಿಚಾರಗಳ ಕುರಿತು ಅರಿವು ಮೂಡಿಸಲು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಅಂಗವಾದ ಸಂಚಾರಿ ಡಿಜಿಟಲ್ ತಾರಾಲಯವು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿನೂತನ ಕಾರ್ಯಕ್ರಮವನ್ನು ನೀಡಿದೆ. ವಿಜ್ಞಾನದ ಅಚ್ಚರಿ ಮತ್ತು ತಾರಾಮಂಡಲದ ಕೌತುಕಗಳನ್ನು ತಾರಾಲಯಗಳಲ್ಲಿ ನೋಡಿ ತಿಳಿದುಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ತಾರಾಲಯಗಳು ವಿಶಾಲವಾದ ಗೊಮ್ಮಟವನ್ನು ಹೊಂದಿದ್ದು ಇದರೊಳಗೆ ಗ್ರಹ, ನಕ್ಷತ್ರ ಹಾಗೂ ಇತರ ಆಕಾಶಕಾಯಗಳನ್ನು ಹೊಂದಿರುವಂತಹ ಕಾಲ್ಪನಿಕ ಆಕಾಶವನ್ನು ಸೃಷ್ಟಿಸಲಾಗಿದೆ. ಈ ಮೂಲಕ ನೈಜರೂಪದ ಆಕಾಶದ ಮುಖಾಂತರ ಖಗೋಳ ವಿಜ್ಞಾನದ ಕುತೂಹಲಕಾರಿ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.

1989 ರಂದು ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಜವಾಹರಲಾಲ್ ನೆಹರು ತಾರಾಲಯವು ಅನೇಕ ವರ್ಷಗಳಿಂದ ಖಗೋಳವಿಜ್ಞಾನ ಮತ್ತು ವೈಜ್ಞಾನಿಕ ವಿಚಾರಗಳ ಕುರಿತು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅರಿವು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ದೂರ ಪ್ರದೇಶದಲ್ಲಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ನೆಹರು ತಾರಾಲಯಕ್ಕೆ ಬರಲು ಕಷ್ಟವಾಗುತ್ತಿರುವುದರಿಂದ ಪ್ರಚಲಿತ ಖಗೋಳ ವಿಜ್ಞಾನದ ಬಗ್ಗೆ ನೋಡಿ ತಿಳಿದುಕೊಳ್ಳುವ ಅವಕಾಶ ಅವರ ಪಾಲಿಗೆ ಕಡಿಮೆಯಾಗಿದೆ. ಇದನ್ನು ಮನಗಂಡ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಪ್ರದರ್ಶನಗಳನ್ನು ನೀಡುವ ಸಂಚಾರಿ ತಾರಾಲಯವನ್ನು ರೂಪಿಸಿದ್ದು ಆ ಯೋಜನೆಯ ಅಂಗವಾಗಿ ಈ ಸಂಸ್ಥೆಯು ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದೆ.

ತಾರಾಲಯದ ವಿಶೇಷತೆಗಳು
ಗಾಳಿ ತುಂಬುವುದರ ಮೂಲಕ ರಚಿತವಾಗಿರುವ ತಾರಾಲಯವು ಗೋಳಾಕಾರದ ಗೊಮ್ಮಟ ಹೊಂದಿದ್ದು ಸುಮಾರು 30 ರಿಂದ 40 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆಯನ್ನು ಹೊಂದಿದೆ. ಫಿಶ್ ಐ ಲೆನ್ಸ್ ಜೋಡಿಸಿರುವ ಡಿಜಿಟಲ್ ಪ್ರೊಜೆಕ್ಟರ್ – ಖಗೋಳ ಮತ್ತು ವಿಜ್ಞಾನ ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ವಿಡಿಯೋಗಳನ್ನು 360 ಡಿಗ್ರಿಯಲ್ಲಿ ಪ್ರೊಜೆಕ್ಟ್ ಮಾಡಿ 180 ಡಿಗ್ರಿಯಲ್ಲಿ ಉತ್ತಮ ಗುಣಮಟ್ಟದ ಶಬ್ದವ್ಯವಸ್ಥೆಯೊಂದಿಗೆ ಪ್ರೊಜೆಕ್ಟರ್ ಮೂಲಕ ವೀಕ್ಷಿಸಬಹುದು.

ಕಾರ್ಯಕ್ರಮದ ಸಂಯೋಜಕ ಚರಂತಯ್ಯ ವಿದ್ಯಾರ್ಥಿಗಳಿಗೆ ನಕ್ಷತ್ರಗಳ ಉಗಮ ಮತ್ತು ಗ್ರಹಗಳ ಸ್ಥಿತಿಗತಿಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ನೀಡಿದರು. ತಾಂತ್ರಿಕ ಸಲಹೆಗಾರ ಶರಣಪ್ಪ ಉಪಸ್ಥಿತರಿದ್ದರು.

Highslide for Wordpress Plugin