ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ರೂವಾರಿಗಳಾಗಬೇಕು: ಡಾ. ಕಲ್ಲಡ್ಕ ಪ್ರಾಭಾಕರ್ ಭಟ್

ಪುತ್ತೂರು: ಶಿಕ್ಷಣವು ಮಗುವಿನ ಮನಸ್ಸನ್ನು ಸಂಸ್ಕರಿಸುವ ಕೆಲಸವನ್ನು ಮಾಡುತ್ತದೆ. ಪಾಠ ಪ್ರವಚನಗಳ ಜೊತೆಗೆ ಬದುಕಿನ ಶಿಕ್ಷಣವನ್ನೂ ಕಲಿಸಿಕೊಡುತ್ತಿದೆ. ಅಂಥ ಶಿಕ್ಷಣವು ಜೀವನಕ್ಕೆ ಒಂದು ದಾರಿ ಮತ್ತು ದಿಕ್ಕನ್ನು ತೋರಿಸುತ್ತದೆ. ಉತ್ತಮ ಶಿಕ್ಷಣದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನೈತಿಕತೆ, ಆದರ್ಶ ಮತ್ತು ಸಾಧನೆಗಳ ಮೂಲಕ ಪಕ್ವಗೊಳ್ಳಬೇಕು. ಇದಕ್ಕೆ ಶಿಕ್ಷಕರಷ್ಟೇ ಅಲ್ಲದೆ ಹೆತ್ತವರ ಸಹಕಾರವೂ ಮುಖ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾದ 2019-20 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಶಿಕ್ಷಣ ಎಂದರೆ ಕೇವಲ ಅಂಕಗಳನ್ನು ಗಳಿಸಿಕೊಳ್ಳುವುದು ಮಾತ್ರವಲ್ಲ. ಸಂಸ್ಕೃತಿ, ಸಂಸ್ಕಾರಗಳನ್ನು ಅಳವಡಿಸಿಕೊಂಡ ಬಾಳ್ವೆ ಮತ್ತು ಕ್ಷಿಪ್ರ ಬದಲಾವಣೆಯ ಈ ಕಾಲಘಟ್ಟದಲ್ಲಿ ಸೂಕ್ತ ಪಥವನ್ನು ಆರಿಸಿಕೊಳ್ಳಲು ಸಹಾಯ ಮಾಡುವುದು. ಆದ್ದರಿಂದ ಪೂರ್ವಜರು ದೇವಾಲಯಗಳಲ್ಲಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು. ಶಿಕ್ಷಣಸಂಸ್ಥೆಗಳಿಂದ ಮಾತ್ರ ಸತ್ಪ್ರಜೆಗಳನ್ನು ನಿರ್ಮಿಸಲು ಸಾಧ್ಯ. ಬದುಕಿನ ಹಾದಿಯಲ್ಲಿ ಮಗು ಪಡೆದುಕೊಳ್ಳುವ ಚಿಕ್ಕ ತಿರುವು ಅದರ ಜೀವನವನ್ನೇ ಬದಲಾಯಿಸಬಹುದು. ಆದ್ದರಿಂದ ಹೆತ್ತವರು ಸರಿಯಾಗಿ ತಿದ್ದಿ ಬುದ್ಧಿ ಹೇಳಿದರೆ ಅವರ ಬದುಕು ಸುಂದರವಾಗುತ್ತದೆ. ಹಾಗಾಗಿ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆಯಿಂದಿರುವುದು ಅಗತ್ಯ ಉತ್ತಮ ವಾತಾವರಣವನ್ನೊಳಗೊಂಡ ವಿದ್ಯಾಕೇಂದ್ರ ಬೆಳೆದು ನಿಂತರೆ ದೇಶಪ್ರೇಮ, ಸಂಸೃತಿಯನ್ನು ಮೈಗೂಡಿಸಿಕೊಂಡ ವ್ಯಕ್ತಿಗಳು ಹೊರ ಬರುತ್ತಾರೆ ಎಂದು ನುಡಿದರು.

2019-20 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಸುಬ್ರಮಣ್ಯ ಭಟ್ ಮಾತನಾಡಿ ಇಂದು ಶಿಕ್ಷಣ ಜ್ಞಾನವಾಗಿ ಉಳಿದಿಲ್ಲ, ಅದು ಕೇವಲ ಮಾಹಿತಿಯನ್ನು ರವಾನಿಸುತ್ತಿದೆ. ರಾಮನ ಉತ್ತರಾಧಿಕಾರಿಗಳನ್ನು ನಿರ್ಮಿಸಬೇಕಾಗಿರುವ ಸಮಾಜ ರಾವಣ, ಕೀಚಕರನ್ನು ನಿರ್ಮಿಸುತ್ತಿದೆ. ಇದರಿಂದ ದೇಶದ ಭವಿಷ್ಯಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಒಳ್ಳೆಯ ಸಂಸ್ಕಾರವನ್ನು ನೀಡಿ ಮಕ್ಕಳನ್ನು ಬೆಳಸಬೇಕೇ ಹೊರತು ಹಣದ ವ್ಯಾಮೋಹಕ್ಕೆ ಬಲಿಯಾಗುವಂತಿರಬಾರದು ಎಂದು ಹೇಳಿದರು.

ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಸಂತೋಷ್ ಬಿ, ಸದಸ್ಯರಾದ ಕೇಶವ ಮೂರ್ತಿ, ಸಚಿನ್ ಶಣೈ, ಗೋವಿಂದರಾಜ್, ರವಿ ಮುಂಗ್ಲಿಮನೆ, 2019-20 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ನೂತನ ಉಪಾಧ್ಯಕ್ಷ ಚಂದ್ರಶೇಖರ್ ಭಟ್, ಮಾಲಾ ಉಮೇಶ್ ಮತ್ತು ಕಳೆದ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ. ಮುರಳಿ ಕೃಷ್ಣ ಉಪಸ್ಥಿತರಿದ್ದರು.

2019-20 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಳೆದ ವರ್ಷದ ಶಿಕ್ಷಕ-ರಕ್ಷಕ ಸಂಘದ ಕಾರ್ಯಗಳ ವರದಿ ವಾಚನ ಜರುಗಿತು. ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಕೆ. ಮಂಜುನಾಥ್ ಸ್ವಾಗತಿಸಿ, ಪ್ರಸ್ತಾವನೆಯ ಮಾತುಗಳನ್ನಾಡಿದರು. ಉಪನ್ಯಾಸಕಿ ವಿನೋದ ಸರಸ್ವತಿ ಕಾರ್ಯಕ್ರಮವನ್ನು ನಿರೂಪಿಸಿ ಉಪಪ್ರಾಂಶುಪಾಲ ಪರಮೇಶ್ವರ ಶರ್ಮ ವಂದಿಸಿದರು.

Highslide for Wordpress Plugin