ಗೀತೆಗಳ ಕಲಿಕೆಯು ಮನುಷ್ಯನ ಮನಸ್ಸಿಗೆ ಸಹನೆ ಮತ್ತು ಸಮಾಧಾನ ತಂದು ಕೊಡುತ್ತದೆ. ಇಂದು ನವಜಾತ ಶಿಶುವಿನಿಂದ ತೊಡಗಿ ವಯೋವೃದ್ಧರನ್ನು ಕೂಡ ಕಸದ ತೊಟ್ಟಿಯಲ್ಲಿ ಕಾಣುವ ಪರಿಸ್ಥಿತಿ ಬಂದೊದಗಿದೆ. ಸಣ್ಣ ಮಕ್ಕಳೂ ಕೂಡ ಜೀವನದಲ್ಲಿ ಜಿಗುಪ್ಸೆ ತಾಳಿ ಸಾವಿಗೆ ಮುಖ ಮಾಡುತ್ತಿದ್ದಾರೆ. ಪರೀಕ್ಷಾ ಫಲಿತಾಂಶದ ದಿನದ ಆತ್ಮಹತ್ಯೆಗಳು ಸಹಜ ಎಂಬಂತಾಗಿದೆ. ಇಂತಹ ಮಾನಸಿಕ ಆತಂಕಗಳಿಂದ ದೂರವಾಗಲು ಗೀತೆಗಳ ಕಲಿಕೆಯು ಸಹಾಯವಾಗುತ್ತದೆ. ತಾಳ್ಮೆ, ಸಹನೆ ಮತ್ತು ಸಮಾಧಾನವು ಗೀತೆಗಳಿಂದ ಲಭಿಸುತ್ತದೆ ಎಂದು ಬೊಳಂತಿಮೊಗರು ಶಾಲೆಯ ಅಧ್ಯಾಪಕ ಶ್ರೀ ವಿಠಲ ನಾಯಕ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ಗೀತೆ ಸಾಹಿತ್ಯ ವೈವಿಧ್ಯ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಸಿನಿಮಾಗೀತೆಗಳೇ ಅಲ್ಲದೆ ಹದಿನೆಂಟು ಪ್ರಕಾರದ ಗೀತ ವೈವಿಧ್ಯ ಕನ್ನಡ ಸಾಹಿತ್ಯದಲ್ಲಿದೆ ಎಂದ ಅವರು ಮಗು ಹುಟ್ಟಿದಾಗ ಕೇಳುವ ಲಾಲಿ ಹಾಡಿನಿಂದ ತೊಡಗಿ ಶಿಶು ಗೀತೆ, ಅಭಿನಯ ಗೀತೆ, ಭಾವಗೀತೆ, ನಾಡಗೀತೆ, ದೇಶಭಕ್ತಿಗೀತೆ, ತತ್ವಪದ, ಭಜನೆ ಹೀಗೆ ಹಲವು ತರದ ಗೀತೆಗಳನ್ನು ಸ್ವತಃ ಹಾಡುತ್ತಾ ಮನೋರಂಜಕವಾಗಿ ವಿವರಣೆಯನ್ನು ಕೊಟ್ಟರು. ಹದಿಹರೆಯದ ಮಕ್ಕಳು ಗಂಡು ಹೆಣ್ಣಿನ ನಡುವಿನ ಪ್ರೀತಿಯನ್ನು ಮಾತ್ರ ಲವ್ ಎಂದು ತಿಳಿದಿದ್ದಾರೆ. ತಾಯಿ ತಂದೆ ಮಕ್ಕಳ ಮೇಲೆ ತೋರಿಸುವ ಪ್ರೀತಿಗೂ ಲವ್ ಎಂದೇ ಹೆಸರು. ಮಕ್ಕಳು ಫೇಸ್‌ಬುಕ್ ನಿಂದ ಹೊರಬಂದು ಬುಕ್‌ಫೇಸ್ ಮಾಡಬೇಕು ಎಂದರು. ಮನುಷ್ಯ ಬದುಕುವುದಲ್ಲ, ಬದುಕನ್ನು ಬಾಳಬೇಕು ಎಂದು ಅವರು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಶಿವಪ್ರಸಾದ ಇ. ಇವರು ಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು. ಗೀತೆಗಳ ಕಲಿಕೆಯಿಂದ ಅರಿವು ಹೆಚ್ಚುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀ ಹೆಚ್.ಕೆ ಪ್ರಕಾಶ ಅವರು ವಿಠಲ ನಾಯಕರು ಪುತ್ತೂರಿನ ಪಾಲಿಗೆ ದೊಡ್ಡ ಆಸ್ತಿ. ಇವರ ಪ್ರತಿಭೆ ಇಡೀ ಕರ್ನಾಟಕಕ್ಕೆ ತಿಳಿಯಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಶ್ರೀ ಜೀವನದಾಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿಂಧೂರಸರಸ್ವತಿ, ಸುಶ್ಮಿತಾ, ಅಖಿಲಾ, ತನ್ವಿ ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕರಾದ ಇಲೆಕ್ಟ್ರೋನಿಕ್ಸ್ ವಿಭಾಗ ಮುಖ್ಯಸ್ಥ ಶ್ರೀ ಪ್ರಸಾದ ಶ್ಯಾನಭಾಗ್ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು.