ವ್ಯಕ್ತಿ ತಾನು ಬದುಕುವುದರೊಂದಿಗೆ ಅನ್ಯರನ್ನು ಬದುಕಲು ಬಿಡಬೇಕು ಆಗ ಮಾತ್ರ ಸುಂದರವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕ ಶ್ರೀ. ಗೋಪಾಲಕೃಷ್ಣ ಡೋಂಗ್ರೆಯವರು ನುಡಿದರು. ಈ ಸಂಸ್ಥೆಯಲ್ಲಿ ನಾನು ಸಲ್ಲಿಸಿದ ೨೧ ವರ್ಷಗಳ ಸೇವೆ ಸಂತೃಪ್ತಿಯನ್ನು, ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ಪ್ರೀತಿಯನ್ನೂ ಒದಗಿಸಿಕೊಟ್ಟಿದೆ. ಈ ಪ್ರೀತಿ ಅಭಿಮಾನಗಳು ನಿವೃತ್ತಿಯ ನಂತರದ ನನ್ನ ಬದುಕಿಗೆ ತುಂಬಾ ಶಕ್ತಿಯನ್ನು ನೀಡಿದೆ. ಎಂದು ಹೇಳಿದರು. ಅವರು ಇತ್ತೀಚೆಗೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬೀಳ್ಕೊಡಗೆ ಸಮಾರಂಭದಲ್ಲಿ ಮಾತಾನಾಡುತ್ತಿದ್ದರು.
ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಸ್ನಾತಕೋತ್ತರ ಪದವಿ ಪಡೆದು ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ೨೧ ವರ್ಷಗಳ ಕಾಲ ವಿವೇಕಾನಂದ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರು ನಿವೃತ್ತರಾದಗ ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ತಮ್ಮ ಪ್ರೀತಿಯ ಗುರುಗಳ ಕುರಿತು ಹಲವಾರು ವಿದ್ಯಾರ್ಥಿಗಳು ತಮ್ಮ ಗೌರವವನ್ನು ಸಲ್ಲಿಸಿದರು.
ಉಪನ್ಯಾಸಕರ ಪರವಾಗಿ ಡಾ. ಮನಮೋಹನ ಎಂ. ಇವರು ನಿವೃತ್ತರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಪ್ರಾಂಶುಪಾಲರಾದ ಶ್ರೀ. ಜೀವನದಾಸ್ ನಿವೃತ್ತರಿಗೆ ಶುಭಹಾರೈಸಿದರು.
ವಿದ್ಯಾರ್ಥಿ ಸಂಘದ ನಾಯಕರಾದ ಜಯರಾಮ ಕೆ., ಭರತ್ಚಂದ್ರ, ಕು.ಹರ್ಷಿತಾ ಆಡೈ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ವಿದ್ಯಾರ್ಥಿ ಕ್ಷೇಮಪಾಲಕರಾದ ಶ್ರೀ ಪ್ರಸಾದ್ ಶಾನುಭಾಗ್ ಸ್ವಾಗತಿಸಿದರು. ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು.