ಪುತ್ತೂರು : ‘ವಿದ್ಯಾರ್ಥಿಗಳಿಗೆ ಎಲ್ಲಾ ಜ್ಞಾನ ಶಿಸ್ತುಗಳ ಬಗೆಗೆ ಪ್ರೀತಿ ಮತ್ತು ಗೌರವವಿರಬೇಕು. ಯಾವ ಹುದ್ದೆಯನ್ನೇರಿದರೂ ಮಾನವೀಯತೆ ಮೂಲ ಜೀವದ್ರವ್ಯವಾಗಿರಬೇಕು’ ಎಂದು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಡಾ. ಶ್ರುತಕೀರ್ತಿರಾಜ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ‘ವಿಜ್ಞಾನ ವಿಷಯಗಳಿಗೆ ಹಲವು ಅವಕಾಶಗಳಿರುವುದು ನಿಜವಾದರೂ ಕಲೆ ಮತ್ತು ವಾಣಿಜ್ಯ ವಿಷಯಗಳಲ್ಲಿಯೂ ಅಭ್ಯಾಸ ನಡೆಸಿ ಉನ್ನತ ಹುದ್ದೆಗಳಿಸಲು ಸಾಧ್ಯ’ ಎಂದು ಅವರು ವಿವರಿಸಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ವಸಂತಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಸಾದ್ ಶ್ಯಾನ್‌ಭಾಗ್ ಪ್ರಸ್ತಾವನೆ ಮಾಡಿದರು. ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಸಂಘದ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ರವೀಂದ್ರ ಪಿ ಅವರು ಲೆಕ್ಕಪತ್ರ ಮಂಡಿಸಿದರು. 2013-14 ನೆಯ ಸಾಲಿನ ಅಂತಿಮ ಪರೀಕ್ಷೆಯಲ್ಲಿ, ಸಿ.ಇ.ಟಿ ಹಾಗೂ ಜೆ.ಇ.ಇ ಯಲ್ಲಿ ಅತ್ಯುತ್ತಮ ಸಾಧನೆಗೈದವರನ್ನು, ಕಲೆ ಹಾಗೂ ಕ್ರೀಡಾಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
2014-15 ನೆಯ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ರವೀಂದ್ರ ಪಿ. ಅವರು ಅಧ್ಯಕ್ಷರಾಗಿ, ರಾಧಾಭಟ್ ಅವರು ಉಪಾಧ್ಯಕ್ಷರಾಗಿ ಹಾಗೂ ಖಜಾಂಚಿಯಾಗಿ ವಿನೋದ್‌ಕುಮಾರ್ ಅವರು ಆಯ್ಕೆಯಾದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ರಾಮಭಟ್, ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀನಿವಾಸ ಪೈ, ಸಂಚಾಲಕರಾದ ಜಯರಾಮ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರೊ. ಎ. ವಿ. ನಾರಾಯಣ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ, ವಿನೋದ ಸರಸ್ವತಿ ವಂದಿಸಿದರು.