ಪುತ್ತೂರು: ವರದಿಗಾರನೊಬ್ಬ ಕಾರ್ಯಕ್ರಮವನ್ನು ಊಹಿಸಿಕೊಂಡು ವರದಿಯನ್ನು ತಯಾರಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿಯಾದರೂ ಆತ ಇಡೀ ಕಾರ್ಯಕ್ರಮವನ್ನು ಆಲಿಸಿ ವರದಿ ಮಾಡಬೇಕಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ ಹೇಳಿದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ರೋಟರಿ ಇಂಟರ್ಯಾಕ್ಟ್ ಕ್ಲಬ್ನ ಜಂಟಿ ಆಶ್ರಯದಲ್ಲಿ ಜರಗಿದ ಪತ್ರಿಕಾ ವರದಿ ತಯಾರಿ ಮಾಹಿತಿ ಉಪನ್ಯಾಸದಲ್ಲಿ ಅವರು ವಿದ್ಯಾರ್ಥಿಗಳಿಗೆ ವರದಿ ತಯಾರಿಕಾ ವಿಧಾನವನ್ನು ತಿಳಿಸಿಕೊಟ್ಟರು.
ವರದಿಗಾರರಲ್ಲಿ ಪತ್ರಿಕಾ ವರದಿಗಾರ ಮತ್ತು ಹವ್ಯಾಸಿ ವರದಿಗಾರ ಎಂದು ಎರಡು ಮಾದರಿ ಇದೆ. ಪತ್ರಿಕೆಗಳಿಗಾಗಿ ವರದಿ ಮಾಡುವವರು ಪತ್ರಿಕಾ ವರದಿಗಾರರಾದರೆ ಹವ್ಯಾಸಿ ವರದಿಗಾರರು ತಮ್ಮ ಸುತ್ತಮುತ್ತಲಿನ ವಿಚಾರಗಳನ್ನು ವರದಿಯ ರೂಪದಲ್ಲಿ ಪತ್ರಿಕೆಗಳಿಗೆ ಕಳುಹಿಸುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದವರ ಹುದ್ದೆ ಮತ್ತು ಹೆಸರು, ಸ್ವಾಗತ ಧನ್ಯವಾದ ಮತ್ತು ನಿರೂಪಣೆ ಮಾಡಿದವರ ಹೆಸರನ್ನು ಸರಿಯಾಗಿ ತಿಳಿದುಕೊಂಡು ವರದಿ ಮಾಡಬೇಕು. ಆ ಕುರಿತು ಮಾಹಿತಿ ಇಲ್ಲದಿದ್ದರೆ ಕಾರ್ಯಕ್ರಮದ ಸಂಘಟಕರನ್ನು ಕೇಳಿ ತಿಳಿದುಕೊಂಡಿರಬೇಕು ಎಂದು ನುಡಿದರು.
ವಿದ್ಯಾರ್ಥಿಗಳಿಗೆ ಪತ್ರಿಕೆಯಲ್ಲಿ ಬರೆಯಲು ಇಂದು ಬೇಕಾದಷ್ಟು ಅವಕಾಶಗಳಿವೆ. ಸುತ್ತ ಮುತ್ತ ನಡೆಯುವ ವಿದ್ಯಮಾನಗಳನ್ನೇ ಲೇಖನ ರೂಪದಲ್ಲಿ ಬರೆದು ಕಳುಹಿಸಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಗೌರವ ಧನದ ರೂಪದಲ್ಲಿ ಹಣವೂ ಸಿಗುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ವರದಿಗಳನ್ನೂ ತಯಾರಿಸಬಹುದು. ತಮ್ಮ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಕುರಿತು ವರದಿ ಮಾಡಿ ಪತ್ರಿಕೆಗಳಿಗೆ ಕಳುಹಿಸುವ ಅವಕಾಶವಿದೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಜಯರಾಮ ಭಟ್ ಎಂ.ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನಿಷ್ಪಕ್ಷಪಾತವಾದ ವರದಿಯನ್ನು ವರದಿಗಾರ ಕೊಡಬೇಕು. ವರದಿಗಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಬಾರದು ಎಂದು ನುಡಿದರು. ವಿದ್ಯಾರ್ಥಿ ಕ್ಷೇಮಪಾಲಕ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ರೋಟರಿ ಇಂಟರ್ಯಾಕ್ಟ್ ಕ್ಲಬ್ನ ಕಾರ್ಯದರ್ಶಿ ಪ್ರೇಕ್ಷಾ ಬಿ.ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ರೋಟರಿ ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷ ವಿನುತ್ ಶೆಟ್ಟಿ ವಂದಿಸಿದರು.