ನಮ್ಮ ದೇಶದ ಹಲವಾರು ಹಿರಿಯ ವಿಜ್ಞಾನಿಗಳ ಚಿಂತನೆಯ ಫಲವಾಗಿ ಇಂದು ಇಸ್ರೋ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದಿದೆ. ಇಸ್ರೋ ಸಂಸ್ಥೆಯ ಪ್ರತಿಯೊಂದು ವಿಜ್ಞಾನಿಯೂ ತನ್ನ ಸ್ವಂತ ಏಳಿಗೆಯನ್ನು ಮರೆತು, ದೇಶ, ಸಮಾಜಕ್ಕೆ ಕೊಡುಗೆ ನೀಡುವುದರ ಬಗ್ಗೆ ಚಿಂತಿಸುವುದರಿಂದ ಇಂದು ಮಹತ್ತರ ಸಾಧನೆಗೈಯಲು ಸಾಧ್ಯವಾಗಿದೆ. ಇಂದಿನ ಜನಾಂಗದ ಒಂದಿಷ್ಟು ಯುವಕರೂ ಇದೇ ದೃಷ್ಟಿಯಲ್ಲಿ ಚಿಂತಿಸದರೆ ಈ ಪರಂಪರೆ ಮುಂದುವರಿಯಲು ಸಾಧ್ಯ. ಆಗ ಭಾರತವನ್ನು ನಾವು ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸಲು ಯಾವುದೇ ಕಷ್ಟ ಬರಲಾರದು ಎಂದು ಇಸ್ರೋ ಸಂಸ್ಥೆಯ ಉಇಔSಂಖಿ ವಿಭಾಗದ ವಿಜ್ಞಾನಿ ಶ್ರೀ ಯಸ್ ಹಿರಿಯಣ್ಣ ಅವರು ನುಡಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇಸ್ರೋ ಸಂಸ್ಥೆ ಬೆಳೆದು ಬಂದ ದಾರಿಯ ಪೂರ್ಣ ವಿವರವನ್ನು ಅವರು ವಿದ್ಯಾರ್ಥಿಗಳಿಗೆ ದೃಶ್ಯ, ಶ್ರವ್ಯ ಮಾಧ್ಯಮಗಳೊಂದಿಗೆ ವಿವರಿಸಿದರು. ಇಸ್ರೋ ಸಂಸ್ಥೆಯಲ್ಲಿರುವ ವಿವಿಧ ಹುದ್ದೆಗಳ ವಿವರಗಳನ್ನು ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿದರು.
ಬಳಿಕ ಮಂಗಳಯಾನದ Power Systems ವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಶ್ರೀ ಯಸ್ ಆನಂದ್ ಇವರು ಮಂಗಳಯಾನದಲ್ಲಿ ಇಸ್ರೋ ಸಂಸ್ಥೆ ಸಾಧಿಸಿದ ಯಶಸ್ಸು, ಕಡಿಮೆ ವೆಚ್ಚದ ಸಾಧನೆಗೆ ಪೂರಕವಾದ ಅಂಶಗಳು, ಯೋಜನೆಯ ಉದ್ದೇಶ, ಇಸ್ರೋ ಸಂಸ್ಥೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಪೂರ್ಣ ವಿವರಗಳನ್ನಿತ್ತರು.
ಪುತ್ತೂರು ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ ಬಂದ ಸುಮಾರು 250 ವಿದ್ಯಾರ್ಥಿಗಳಿಗಾಗಿ ಶ್ರೀ ಯಸ್ ಹಿರಿಯಣ್ಣ ಅವರು ಗಣಿತದ ಕುತೂಹಲಕರ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅವರ ಮೂಲಕವೇ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಗಣಿತದಲ್ಲಿ ಆಸಕ್ತಿ ಮೂಡಿಸುವ ಬಗೆಯನ್ನು ತಿಳಿಸಿಕೊಟ್ಟರು. Be Brainy Education ಸಂಸ್ಥೆಯ ಮುಖ್ಯಸ್ಥೆ ಕುಮಾರಿ ಮೇಖಲಾ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೂಮಿಯ ನಮ್ಮ ದೈನಂದಿನ ಜೀವನಕ್ಕೂ, ಬಾಹ್ಯಾಕಾಶದಲ್ಲಿರುವ ಗಗನಯಾನಿಯ ಜೀವನಕ್ಕೂ ಇರುವ ಕುತೂಹಲಕಾರಿ ವ್ಯತ್ಯಾಸಗಳ ಕುರಿತು ವಿವರ ನೀಡಿದರು. ಕುಮಾರಿ ಮನೀಷಾ ಕಾರ್ಯಕ್ರಮ ನಿರೂಪಿಸದರು, ಹರೀಶ ಶಾಸ್ತ್ರಿ ವಂದಿಸಿದರು.