ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

“ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠ ಪ್ರವಚನಗಳ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತನ್ನ ಮೂಲಕ ಅರ್ಪಣಾ ಮನೋಭಾವ ಮತ್ತು ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು” ಎಂದು ನವಜೀವನ ಪ್ರೌಢಶಾಲೆ, ಬದಿಯಡ್ಕ ಇದರ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಶಂಕರನಾರಾಯಣ ಭಟ್ ಇವರು ತಿಳಿಸಿದರು.

DSC_0587

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿಗಳ ಪ್ರಗತಿಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು “ಮಕ್ಕಳು ಇಚ್ಛಾಶಕ್ತಿ, ಬದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ನಕರಾತ್ಮಕ ಮಾತುಗಳನ್ನಾಡದೆ ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವುದು ಹೆತ್ತವರ ಕರ್ತವ್ಯ” ಎಂದು ಕಿವಿಮಾತು ಹೇಳಿದರು.

ಶಿಕ್ಷಕ-ರಕ್ಷಕ ಸಂಘದ ನೂತನ ಅದ್ಯಕ್ಷೆಯಾಗಿ ಮಾತನಾಡಿದ ಶ್ರೀಮತಿ ಶ್ಯಾಮಲ ಇವರು “ವಿದ್ಯಾರ್ಥಿ ಒಂದು ವಿದ್ಯಾಸಂಸ್ಥೆಯಿಂದ ಪಡೆಯಬೇಕಾಗಿದ್ದಕ್ಕಿಂತ ಹೆಚ್ಚು ಆ ವಿದ್ಯಾಸಂಸ್ಥೆಗೆ ನೀಡಬೇಕು. ಈ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ,ಶಿಸ್ತು,ಸಂಸ್ಕೃತಿ ನೀಡುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾಲೇಜಿನ ಚಿಗುರು ಭಿತ್ತಿ ಪತ್ರಿಕೆ ವಿಶೇಷ ಸಂಚಿಕೆಯನ್ನು ಶ್ರೀ ಎಸ್ ಶಂಕರನಾರಾಯಣ ಭಟ್ ಇವರು ಬಿಡುಗಡೆ ಮಾಡಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸಿ.ಇ.ಟಿ ಮತ್ತು ಜೆ.ಇ.ಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಗೌತಮ್ ಎ.ಪಿ ಇವರಿಗೆ ಚಿನ್ನದ ಪದಕ ಮತ್ತು ಲ್ಯಾಪ್‌ಟಾಪ್‌ನ್ನು ನೀಡಿ ಗೌರವಿಸಲಾಯಿತು. ಅದೇ ರೀತಿ ಮೆಡಿಕಲ್ ವಿಭಾಗದಲ್ಲಿ ವಿಶೇಷ ಸಾಧನೆಗೈದ ಚಂದನ್ ಎ. ಮತ್ತು ರವಿಶಂಕರ್ ಇವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಇವರು 2015-16 ರ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ವರದಿ ವಾಚನವನ್ನು ಮಾಡಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀ ಪರಮೇಶ್ವರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರತ್ನಾವತಿ ವಂದನಾರ್ಪಣೆ ಮಾಡಿದರು.

Highslide for Wordpress Plugin